ಭಟ್ಟನಾರಾಯಣ
	ಕ್ರಿ.ಶ. 800. ವೇಣೀ ಸಂಹಾರ (ಸಂಸ್ಕøತ) ನಾಟಕದ ಕರ್ತೃ. ಈತನ ಕಾಲ ದೇಶಗಳು ನಿಷ್ಕøಷ್ಟವಾಗಿ ತಿಳಿದಿಲ್ಲ. ವಾಮನ ಮೊದಲಾದ ಲಾಕ್ಷಣಿಕರು ಈತನ ನಾಟಕಗಳಿಂದ ಉದಾಹರಣೆಗಳನ್ನು ತೆಗೆದುಕೊಂಡಿರುವುದರಿಂದ ಈತ ವಾಮನನಿಗಿಂತ ಹಿಂದೆ ಇದ್ದವನೆಂಬುದು ನಿರ್ವಿವಾದ. ವಾಮನನ ಕಾಲ ಕ್ರಿಶ ಸು 800. ಈ ನಾಟಕದ ಪ್ರಸ್ತಾವನೆಯಿಂದ ಭಟ್ಟನಾರಾಯಣನಿಗೆ ಮೃಗ ರಾಜ ಎಂಬ ಉಪಾನಾಮಧೇಯವಿದ್ದಂತೆ ತೋರುತ್ತದೆ. ಈತ ಬ್ರಾಹ್ಮಣನೆಂದೂ ಈತನನ್ನು ಆದಿಶೂರ ಕನ್ಯಾಕುಬ್ಜದಿಂದ ಬಂಗಾಳಕ್ಕೆ ಆಶ್ರಯಕೊಟ್ಟು ಕರೆಸಿಕೊಂಡನೆಂದೂ ಪ್ರತೀತಿ. ಇದರ ಆಧಾರದ ಮೇಲೆ ಸ್ಟನ್ ಕೋನೊ ಭಟ್ಟನಾರಾಯಣನ ಕಾಲ ಏಳನೆಯ ಶತಮಾನದ ಉತ್ತರಾರ್ಧವಿರಬಹುದೆಂದು ಅಭಿಪ್ರಾಯಪಡುತ್ತಾರೆ. ಇದಕ್ಕೆ ದೃಢವಾದ ಆಧಾರಗಳಿಲ್ಲ.

	ವೇಣೀ ಸಂಹಾರ ಆರು ಅಂಕಗಳ ನಾಟಕ. ಕಥಾಸಾರ ಹೀಗಿದೆ:
	ಕೃಷ್ಣ ಕೌರವರಲ್ಲಿ ಸಂಧಿಗೆ ಹೋದಾಗ ಭೀಮ ತಾಳ್ಮೆ ತಪ್ಪಿ ಚಡಪಡಿಸುತ್ತಿರುತ್ತಾನೆ. ಏತನ್ಮಧ್ಯೆ ದ್ರೌಪದಿ ಬಂದು ಭಾನುಮತಿ ತನ್ನನ್ನು ಮೂದಲಿಸಿದುದನ್ನು ತಿಳಿಸಿ ಭೀಮನನ್ನು ಮತ್ತೂ ರೇಗಿಸುತ್ತಾಳೆ. ಅತ್ತ ಸಂಧಿ ಮುರಿಯಿತೆಂಬ ವರ್ತಮಾನ ಬರುತ್ತದೆ (1). ಭಾನುಮತಿಗೆ ಕೆಟ್ಟಕನಸು ಬಿದ್ದುದರ ಪರಹಾರಕ್ಕಾಗಿ ಅವಳು ನಿಯಮದಿಂದ ಇರುವಾಗ ದುರ್ಯೋಧನ ಅದನ್ನು ಭಂಗಪಡಿಸುತ್ತಾನೆ. ದುರ್ಯೋಧನನಿಗೆ ಅಪಶಕುನವಾಗುವುದು. ಗಾಳಿ ಎದ್ದು ತೇರಿನ ಧ್ವಜ ಮುರಿಯುವುದು. ಜಯದ್ರಥನ ತಾಯಿ ಮತ್ತು ಹೆಂಡತಿ ಬಂದು ಅರ್ಜುನ ಮಾಡಿದ ಪ್ರತಿಜ್ಞೆ ತಿಳಿಸಿದಾಗ ದುರ್ಯೋಧನ ಅದನ್ನು ಭಂಗಪಡಿಸುತ್ತಾನೆ. ದುರ್ಯೋಧನನಿಗೆ ಅಪಶಕುನವಾಗುವುದು. ಗಾಳಿ ಎದ್ದು ತೇರಿನ ಧ್ವಜ ಮುರಿಯುವುದು. ಜಯದ್ರಥನ ತಾಯಿ ಮತ್ತು ಹೆಂಡತಿ ಬಂದು ಅರ್ಜುನ ಮಾಡಿದ ಪ್ರತಿಜ್ಞೆ ತಿಳಿಸಿದಾಗ ದುರ್ಯೋಧನ ಅವರನ್ನು ಸಮಾಧಾನ ಮಾಡಿ ಕಳುಹಿಸುವನು. (2) . ದ್ರೋಣಾಚಾರ್ಯರು ಸತ್ತ ಪರಿಯನ್ನು ಕೇಳಿ ಪಾಂಡವರ ಮೇಲೆ ಕುಪಿತನಾದ ಅಶ್ವತ್ಥಾಮ ದುರ್ಯೋಧನನ ಬಳಿಗೆ ಬಂದು ಸೇನಾಧಿಪತ್ಯ ಕೇಳುವನು, ಮೊದಲೇ ನಿಶ್ಚಯವಾದಂತೆ ಕರ್ಣನಿಗೆ ಸೇನಾಧಿಪತ್ಯ ಕೊಡುವುದಾಗಿ ದುರ್ಯೋಧನ ಹೇಳುವನು. ಅಲ್ಲದೆ ಅಲ್ಲಿಯೇ ಇದ್ದ ಕರ್ಣನ ಮೂದಲಿಕೆಯಿಂದಾಗಿ ಅಶ್ವತ್ಥಾಮ ಕರ್ಣ ಸಾಯುವತನಕವೂ ತಾನು ಆಯುಧ ಹಿಡಿಯುವುದಿಲ್ಲವೆಂದು ಶಪಥಮಾಡುವನು (3). ದುಶ್ಯಾಸನನ ವಧೆ, ಕರ್ಣಾರ್ಜುನರ ಕಾಳಗದ ವರ್ಣನೆ (4). ಧೃತರಾಷ್ಟ್ರ ಗಾಂಧಾರಿಯರು ರಣರಂಗದಲ್ಲಿದ್ದ ದುರ್ಯೋಧನನನ್ನು ಕಂಡು ಸಂಧಿ ಮಾಡಿ ಕೊಳ್ಳುವಂತೆ ಹೇಳುವನು, ಕರ್ಣನ ಸಾವಿನ ಸುದ್ದಿ. ದುರ್ಯೋಧನ ತಾನೇ ಸೇನಾಧಿಪತ್ಯ ವಹಿಸಿ ಶತ್ರುಗಳನ್ನು ಕೊಲ್ಲಲು ಪ್ರತಿಜ್ಞೆ ಮಾಡುವನು. ಭೀಮಾರ್ಜುನರು ಅಲ್ಲಿಗೆ ಬರುವರು. ದುರ್ಯೋಧನ ಭೀಮ ಇಬ್ಬರಿಗೂ ಮಾತು ನಡೆದು ಮರುದಿನ ಸಂಜೆಯೊಳಗಾಗಿ ದುರ್ಯೋಧನನನ್ನು ಕೊಲ್ಲುವ ಪ್ರತಿಜ್ಞೆ ಮಾಡುವನು. (5). ಕೊಳದಲ್ಲಿ ಅವಿತಿದ್ದ ದುರ್ಯೋಧನ ಹೊರಬಂದು ಭೀಮ-ದುರ್ಯೋಧನರಿಗೆ ಕಾಳಗವಾಗುತ್ತಿರುವುದೆಂದು ಧರ್ಮರಾಯ ದ್ರೌಪದಿಯರಿಗೆ ವರ್ತಮಾನ ಬರುವುದು. ಈ ಮಧ್ಯೆ ದುರ್ಯೋಧನನ ಸ್ನೇಹಿತನಾದ ಚಾರ್ವಾಕನೆಂಬ ರಾಕ್ಷಸ ಋಷಿ ವೇಷದಲ್ಲಿ ಬಂದು ಭೀಮ ಸತ್ತನೆಂದೂ ಅರ್ಜುನ ಕೂಡ ಸತ್ತಿರಬಹುದೆಂದೂ ತಿಳಿಸಿದಾಗ ಧರ್ಮರಾಯ-ದ್ರೌಪದಿಯರು ಅಗ್ನಿ ಪ್ರವೇಶಕ್ಕೆ ಸಿದ್ಧರಾಗುವರು. ಆ ವೇಳೆಗೆ ಭೀಮ ದುರ್ಯೋಧನನನ್ನು ಕೊಂದು ಮೈಯೆಲ್ಲ ರಕ್ತವಾಗಿ ದ್ರೌಪದಿಯನ್ನು ಹುಡುಕಿಕೊಂಡು ಬರುವನು. ಅವನನ್ನು ದುರ್ಯೋಧನನೆಂದು ತಿಳಿದು ಎಲ್ಲರೂ ಭಯ ಭ್ರಾಂತರಾಗುವರು. ಕೊನೆಗೆ ನಿಜಸ್ಥಿತಿ ತಿಳಿದು ವೇಣೀ ಸಂಹಾರವಾಗುವುದು (6).

	ಇದು ಕೃಷ್ಣ ಸಂಧಾನದಿಂದ ಹಿಡಿದು ದುರ್ಯೋಧನನ ಸಂಹಾರದವರೆಗಿನ ಭಾರತಕಥೆ. ಇಷ್ಟು ದೊಡ್ಡ ಕಥೆಯನ್ನು ಅಡಕಗೊಳಿಸಿ ರಸವತ್ತಾಗಿ ಪಾತ್ರಗಳನ್ನು ಚಿತ್ರಸುವಲ್ಲಿ ಕವಿ ತನ್ನ ಕೌಶಲ ಮೆರದಿದ್ದಾನೆ. ಲಕ್ಷಣ ಗ್ರಂಥವಾದ ದಶರೂಪಕದಲ್ಲಿ ವೇಣೀ ಸಂಹಾರ ತುಂಬ ಉದಾಹೃತವಾಗಿದೆ. ಇದು ಶಾಸ್ತ್ರವನ್ನು ಮುಂದಿಟ್ಟುಕೊಂಡೇ ರಚಿತವಾದಂತಿದೆ. ಇದರಲ್ಲಿ ನಿಯಮ ಪರಿಪಾಲನೆ ಸ್ವಲ್ಪ ಕಡಿಮೆಯಾಗಿದ್ದರೆ ಉತ್ತಮ ನಾಟಕವಾಗುತ್ತಿತ್ತೆಂದು ತೋರುತ್ತದೆ. ಯುದ್ಧವೀರಪ್ರಧಾನವಾದ ಈ ನಾಟಕದಲ್ಲಿ ರಂಗದ ಮೇಲೆ ಯುದ್ಧವೇ ಬರುವುದಿಲ್ಲ. ಮೊದಲನೆಯ ಅಂಕ ಭೀಮನ ವೀರಾವೇಶದ ಮಾತುಗಳಿಂದ ಪ್ರಾರಂಭವಾದರೂ ಯುದ್ಧವನ್ನು ವಿವರಿಸುವ ಸುಂದರ ಪಾಂಚಾಲಕರು ನಾಲ್ಕು ಮತ್ತು ಆರನೆಯ ಅಂಕಗಳಲ್ಲಿ ಬೇಸರ ತರಿಸುತ್ತಾರೆ. ಇದರ ಐದನೆಯ ಅಂಕ ನಾಟಕದಲ್ಲೆಲ್ಲ ಶ್ಲಾಘ್ಯವಾದ ಭಾಗ. ಇಲ್ಲಿ ಕವಿ ಕರುಣವನ್ನೂ ವೀರವನ್ನೂ ಚೆನ್ನಾಗಿ ಚಿತ್ರಿಸಿದ್ದಾನೆ. ದುರ್ಯೋಧನನಿಗೆ ಮುಪ್ಪಿನ ತಂದೆ ತಾಯಿಗಳಲ್ಲಿ ಇದ್ದ ಭಕ್ತಿ, ಕರ್ಣನಲ್ಲಿ ಇದ್ದ ಸ್ನೇಹ, ಅಶ್ವತ್ಥಾಮನಲ್ಲಿದ್ದ ತಿರಸ್ಕಾರ ಭೀಮಾರ್ಜುನರ ಮೇಲಿದ್ದ ದ್ವೇಷ ಎಲ್ಲವೂ ಚೆನ್ನಾಗಿ ಪ್ರತಿಪಾದಿತವಾಗಿದೆ.

	ಈ ನಾಟಕ ರಚನೆಯಲ್ಲಿ ಭಟ್ಟನಾರಾಯಣ ತನ್ನ ಕಲಾ ಪ್ರೌಢಿಮೆ, ಭಾಷಾಭಿಜ್ಞತೆ, ಸಂಭಾಷಣಾ ವೈಖರಿ, ಕವಿತಾ ಕುಶಲತೆ ಇತ್ಯಾದಿಯಾಗಿ ಮಹಾಕವಿ ಲಕ್ಷಣಗಳನ್ನೆಲ್ಲ ಮೆರೆದಿದ್ದಾನೆ. ನಾಟಕೀಯ ಲಕ್ಷಣಗಳೆಲ್ಲ ಈ ಕೃತಿಯಲ್ಲಡಗಿವೆ. ಪಾತ್ರ ಸೃಷ್ಟಿ ಶ್ಲಾಘನೀಯ. ಇಲ್ಲಿಯ ಹಲವು ಪಾತ್ರಗಳು ಜೀವಂತವಾಗಿ ಉಳಿಯುವುವು.

	ಜನರ ಮನವೊಲಿಸಲು, ಪಾಂಡಿತ್ಯ ಪ್ರದರ್ಶಿಸಲು ಕವಿತಾಶಕ್ತಿ ಪ್ರದರ್ಶನಕ್ಕಾಗಿ ಬಂದ ಈ ಕೃತಿ ಒಂದು ಪ್ರಕೃಷ್ಟ ಕಾವ್ಯ. ವಿದ್ವನ್ಮನೋರಂಜಕ ಕೃತಿ ರಸಿಕರಂಜರ ಕೃತಿಯಲ್ಲ.

	ವೇಣೀ ಸಂಹಾರದ ವಸ್ತು ರಸ ಮಾತುಕಥೆಗಳನ್ನು ಪಂಪರನ್ನರು ಪೂರ್ತಿಯಾಗಿ ಉಪಯೋಗಿಸಿಕೊಂಡಿದ್ದಾರೆ. ಆದ್ದರಿಂದ ಪಂಪ ಭಾರತದ ಹದಿಮೂರನೆಯ ಅಶ್ವಾಸವೂ ಗದಾಯುದ್ಧದ ಬಹುಭಾಗವೂ ಕಳೆಗಟ್ಟಿವೆ.
(ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ